ವೈರಸ್
 	ರೋಗೋತ್ಪಾದಕ ಕಣ. ಕೇಂದ್ರದಲ್ಲಿ ನ್ಯೂಕ್ಲಿಯಿಕ್ ಆಮ್ಲವೂ ಇದನ್ನು ಆವರಿಸಿ ಪ್ರೋಟೀನ್ ಆವರಣವೂ ಇದೆ. ದೃಕ್‍ಸೂಕ್ಷ್ಮ ದರ್ಶಕದಲ್ಲಿ ಗೋಚರವಾಗದಷ್ಟು ಕಿರಿದು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕಕ್ಕೆ ಮಾತ್ರ ಗೋಚರ. ಗಾತ್ರ 20-300 ನ್ಯಾನೊಮೀಟರ್ 

	(1 ನ್ಯಾನೊಮೀಟರ್ = 10-9 ಮೀ). ಆತಿಥೇಯವೊಂದರ ಜೀವಂತ ಕೋಶದ ಒಳಗೆ ಮಾತ್ರ ಬೆಳೆದು ವರ್ಧಿಸಬಲ್ಲದು. ಈ ಕೋಶ ಕುರಿತಂತೆ ವೈರಸ್ ಒಂದು ಪರಪುಷ್ಟ ಜೀವಿ. ಆತಿಥೇಯದ ಹೊರಗಡೆ ವೈರಸ್‍ನಲ್ಲಿ ಯಾವುದೇ ಕಿಣ್ವಕ್ರಿಯೆ ಜರುಗದು. ಎಂದೇ ಇದನ್ನು ಅಜೀವಿಯೆಂದು ಪರಿಗಣಿಸುವುದು ವಾಡಿಕೆ. 

	ವೈರಸಿನ ದೇಹದ ಹೊರಭಾಗ: ಪ್ರೋಟೀನ್‍ನಂಥ ಕವಚದಿಂದ ಆವೃತವಾಗಿದ್ದು, ಒಳಭಾಗದಲ್ಲಿ ಡಿಎನ್‍ಎ ಅಥವಾ ಆರ್‍ಎನ್‍ಎ ಗಳಿರುತ್ತವೆ. ವೈರಸ್ಸಿನಲ್ಲಿ ಜೀವಿ, ಅಜೀವಿಗಳೆರಡರ ಗುಣಲಕ್ಷಣಗಳನ್ನು ಕಾಣುತ್ತೇವೆ. ಆದ್ದರಿಂದ ಇದನ್ನು ಜೀವಿ-ಅಜೀವಿ ನಡುವಿನ ಕೊಂಡಿ ಯೆಂದು ಹೇಳಲಾಗುತ್ತದೆ. ಜೀವಿಯ ಕೋಶದ ಒಳಹೋಗುವ ವೈರಸ್ ಆ ಎಲ್ಲಕಾರ್ಯಗಳನ್ನೂ ತಾನು ವಹಿಸಿಕೊಳ್ಳುತ್ತದೆ ಮತ್ತು ಜೀವಿಯ ಕೋಶದ್ರವ್ಯದ ನೆರವಿನಿಂದ ತನ್ನನ್ನೇ ಹೋಲುವ ಜೀವಿಗಳನ್ನು ಉತ್ಪತ್ತಿ ಮಾಡುತ್ತದೆ. ಅನಂತರ ಆಶ್ರಯವಿತ್ತ ಜೀವಿಕೋಶವನ್ನು ಛಿದ್ರಗೊಳಿಸಿ ಹೊರಬರುತ್ತದೆ. ವೈರಸ್ಸುಗಳು ಸಿಡುಬುರೋಗ, ನೀರುಕೋಟ್ಲೆ, ಅಂಗರೆ ಕಜ್ಜಿ, ಜರ್ಮನ್ ಮೀಸೆಲ್ಸ್ ರುಬೆಲ್ಲಾ, ನೆಗಡಿ ಮತ್ತು ಶೀತ, ಯಕೃತ್ ಕಾಯಿಲೆ, ಪೋಲಿಯೋ, ಏಡ್ಸ್, ಹಾಗೆಯೇ ಹಲವಾರು ಸಸ್ಯರೋಗಗ ಳನ್ನು ಕೂಡ ಉಂಟುಮಾಡುತ್ತವೆ. ಸಸ್ಯಗಳಲ್ಲಿ ಮೊಸಾಯಿಕ್ಸ್ ಮತ್ತು ಕುಬ್ಜರೋಗಗಳು ಸಾಮಾನ್ಯ.			
(ಟಿ.ಎಮ್.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ